ಪ್ರದಕ್ಷಿಣೆ	- 
ಪೂಜ್ಯವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವರು ಮುಂತಾದವುಗಳನ್ನು ಸುತ್ತುವುದಕ್ಕೆ ಈ ಹೆಸರು. ದಕ್ಷಿಣ ಎಂದರೆ ಬಲಭಾಗ ಎಂಬರ್ಥ. ಈ ಪದದಿಂದಲೇ ಪ್ರದಕ್ಷಿಣ ಪದ ರೂಪಗೊಂಡಿದೆ. ಕಾಲಿಕಾಪುರಾಣದಲ್ಲಿ ಬಲಕೈಯನ್ನು ಇಳಿಬಿಟ್ಟುಕೊಂಡು ತಲೆಯನ್ನು ವಿನಯದಿಂದ ಬಗ್ಗಿಸಿ ದೇವರು ತನ್ನ ಬಲಭಾಗದಲ್ಲಿ ಬರುವಂತೆ ಭಕ್ತಿಯಿಂದ ಸುತ್ತುವುದಕ್ಕೆ ಪ್ರದಕ್ಷಿಣೆ ಒಂದು ಹೆಸರು ಎಂದು ಹೇಳಿದೆ. ಕನ್ನಡದಲ್ಲಿ ಪ್ರದಕ್ಷಿಣೆ ಹಾಕುವುದಕ್ಕೆ ಬಲಬರುವುದು ಎನ್ನುತ್ತೇವೆ. ಅವನವನ ಉದ್ದೇಶ, ಪೂಜ್ಯದೇವತೆ-ಇವುಗಳಿಗೆ ತಕ್ಕಂತೆ ಒಂದು ಸಲ, ಮೂರು ಸಲ, ನಾಲ್ಕು ಸಲ, ಇತ್ಯಾದಿ ಪ್ರದಕ್ಷಿಣೆ ಮಾಡಬೇಕೆಂದು ಹೇಳಿದೆ, ಕರ್ಮಲೋಚನವೆಂಬ ಗ್ರಂಥದಲ್ಲಿ, ದೇವಿಗೆ ಒಂದು, ಸೂರ್ಯನಿಗೆ ಏಳು, ವಿನಾಯಕನಿಗೆ ಮೂರು, ವಿಷ್ಣುವಿಗೆ ನಾಲ್ಕು, ಶಿವನಿಗೆ ಅರ್ಧ ಪ್ರದಕ್ಷಿಣೆ ಮಾಡಬೇಕೆಂದು ಹೇಳಿದೆ. ಕೆಲವು ನಿಯಮಗಳಿಗೆ ಅನುಸಾರವಾಗಿ 40,108 ಇತ್ಯಾದಿ ಪ್ರದಕ್ಷಿಣಗಳನ್ನು ಮಾಡುವುದು ಉಂಟು. ಪೂಜ್ಯವಾದ ವಸ್ತು ಯಾವುದನ್ನು ಕಂಡರೂ ಅವುಗಳನ್ನು ಮೀರಿ ಹೋಗುವಾಗ ಪ್ರದಕ್ಷಿಣವಾಗಿಯೇ ಅಂದರೆ ಅವನ್ನು ತಮ್ಮ ಬಲಕ್ಕೆ ಬಿಟ್ಟು ಹೋಗಬೇಕೆಂದು ಶಾಸ್ತ್ರಗಳು ಹೇಳುತ್ತವೆ.

	ಭಾರತೀಯರಲ್ಲಿ ಮೊದಲ ಪ್ರದಕ್ಷಿಣೆ ಅನಂತರ ನಮಸ್ಕಾರ ಬರುತ್ತವೆ.
(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ